ಅಬ್ದುಲ್ ಮಜೀದ್
	ತುರ್ಕಿಯ ಆಟೊಮನ್ ಸುಲ್ತಾನ (1823-1861). ತಂದೆಯಾದ ಎರಡನೆಯ ಮಹಮ್ಮದನು ಕಾಲವಾದ (1839) ಮೇಲೆ ತನ್ನ ಹದಿನಾರನೆಯ ವಯಸ್ಸಿನಲ್ಲೇ ಸಿಂಹಾಸನವನ್ನೇರಿದ. ದಂಗೆಯೆದ್ದಿದ್ದ ಈಜಿಪ್ಟ್ ಮಂಡಲಾಧಿಪತಿ ಮಹಮ್ಮದಾಲಿಯನ್ನಡಗಿಸಿ ಅವನೊಂದಿಗೆ ಒಪ್ಪಂದ ಮಾಡಿಕೊಂಡ. ತಂದೆ ಪ್ರಾರಂಭಿಸಿದ್ದ ರಾಜಕೀಯ ಮತ್ತು ಸಾಮಾಜಿಕ ಸುಧಾರಣೆಗಳನ್ನು ಮುಂದುವರಿಸಿದ. ಹತ್ತಿಷರೀಫ್ ಎಂಬ ರಾಜಶಾಸನವನ್ನು ಹೊರಡಿಸಿ, ಯಾವ ಜನಾಂಗದವರೇ ಆಗಿರಲಿ, ಯಾವ ಮತದವರೇ ಆಗಿರಲಿ ಆಟೊಮನ್ ಪ್ರಜೆಗಳೆಲ್ಲರಿಗೂ ಸಮಾನ ಹಕ್ಕು ಭಾದ್ಯತೆಗಳಿವೆಯೆಂದು ಸಾರಿದ. ತೆರಿಗೆಭಾರ ಎಷ್ಟಿರಬೇಕೆಂಬುದನ್ನು ಖಚಿತಪಡಿಸಿ 1856ರಲ್ಲಿ ಜಾರಿಗೆ ತಂದ ಹೊಸ ಶಾಸನವೊಂದರ ಪ್ರಕಾರ ತನ್ನ ರಾಜ್ಯದಲ್ಲಿ ನೆಲಸಿದ್ದ ಕ್ರೈಸ್ತಪ್ರಜೆಗಳಿಗೆ ಸಂಪೂರ್ಣ ಪೌರ ಮತ್ತು ರಾಜಕೀಯ ಹಕ್ಕುಗಳನ್ನು ನೀಡಿದ್ದರಿಂದ ಪಾಶ್ಚಾತ್ಯ ದೇಶಗಳಿಂದ ಕೈಗಾರಿಕಾಭಿವೃದ್ಧಿಗೆ ಬಂಡವಾಳಧನ ಬರಲು ಅನುಕೂಲವಾಯಿತು. ವಿದ್ಯಾವಂತ, ಫ್ರೆಂಚ್ ಭಾಷೆಯನ್ನೂ ಕಲಿತಿದ್ದ; ಇದರಿಂದ ಮತ್ತು ಉದಾರನೀತಿಯ ಪರಿಣಾಮವಾಗಿ, ಇಂಗ್ಲೆಂಡ್ ಫ್ರಾನ್ಸ್‍ಗಳೊಡನೆ ಮೈತ್ರಿ ಬೆಳೆಯಿತು; ರಷ್ಯದೊಂದಿಗೆ ನೆಡೆದ ಕ್ರೀಮಿಯ ಯುದ್ಧದಲ್ಲಿ ಆ ರಾಷ್ಟ್ರಗಳ ನೆರವೂ ದೊರಕಿತು. ಮುಂದೆ ಹಣಕಾಸಿನ ಮುಗ್ಗಟ್ಟು, ವಿರೋಧಿಗಳ ಒಳಸಂಚು, ಇವುಗಳಿಂದ ಅವನಿಗೆ ಕೊನೆಗಾಲದವರೆಗೂ ಶಾಂತಿಯಿಲ್ಲದಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ